ಚತುರ್ಮುಖ ಬೊಮ್ಮರಸ : -

	ರೇವಣ್ಣಸಿದ್ದೇಶ್ವರಪುರಾಣ ಎಂಬ ಕನ್ನಡ ಗ್ರಂಥದ ಕರ್ತೃ. 16ನೆಯ ಶತಮಾನದಲ್ಲಿದ್ದ ಆಸ್ಥಾನಕವಿಯಾಗಿದ್ದ ಈತ ವೀರಶೈವ. ಭಾರವಿ, ಕಾಳಿದಾಸ, ಮಲುಹಣ, ಬಾನ, ಮಯೂರಾದಿ ಸಂಸ್ಕøತ ಕವಿಗಳನ್ನೂ ಹಂಪೆಯ ಹರೀಶ್ವರ, ರಾಘವಾಂಕ, ಮೊಗ್ಗೆಯ ಮಾಯಿದೇವ, ಕೆರೆಯ ಪದ್ಮರಸ, ಪಾಲ್ಕುರಿಕೆ ಸೋಮನಾಥ ಮೊದಲಾದ ಕನ್ನಡ ಕವಿಗಳನ್ನೂ ಸ್ತುತಿಸಿದ್ದಾನೆ.

ಈತ ಚತುರಾಸ್ಯಮಾಯಣನ ತನುಜಾತ. ತನ್ನನ್ನು ಸರಸಕವಿ, ಶೈವಭೂದೇವ ಕುಲತಿಲಕ, ವರ್ಣನ ಕವೀಂದ್ರ, ಕವಿಸಭಾಮಾಣಿಕ್ಯದೀಪ, ಕರ್ನಾಟಕದೇಶವಿಶೇಷ ಭಾಷಾಪ್ರವೀಣ, ಕವಿಬ್ರಹ್ಮ, ಸರಸಗೀರ್ವಾಣ ಭಾಷಾಯುಕ್ತ, ಶೈವಾಗಮಜ್ಞ ಎಂದು ಮೊದಲಾಗಿ ಕರೆದುಕೊಂಡಿದ್ದಾನೆ. 

ವಿಶ್ವನಾಥಾಚಾರ್ಯ ಹಾಗೂ ಬಾಲಸಿದ್ದೇಶ್ವರರು ಈತನ ಗುರುಗಳಾಗಿದ್ದಂತೆ ತಿಳಿದುಬರುತ್ತದೆ.
ಸೌಂದರಪುರಾಣ 63 ಜನ ಶೈವಪುರಾತನರಲ್ಲಿ ಒಬ್ಬನಾದ ನಂಬಿಯಣ್ಣನನ್ನು ಕುರಿತ ಕಾವ್ಯ. 565 ವಾರ್ಧಕಷಟ್ಪದಿಗಳಿರುವ 13 ಸಂಧಿಗಳ ಈ ಕಾವ್ಯವನ್ನು ವಸ್ತುಕ ರೂಪದಲ್ಲಿ, ಚಿಕ್ಕವೀರಣಾರ್ಯನ ಆಜ್ಞಾನುಸಾರವಾಗಿ, ರಚಿಸಿದುದಾಗಿ ಕವಿ ಹೇಳಿಕೊಂಡಿದ್ದಾನೆ. ಸೂರ್ಯಚಂದ್ರರು ಹಾಗೂ ಶಿವತತ್ತ್ವಗಳು ಇರುವವರೆಗೆ ಈ ಕಾವ್ಯವು ವಿರಾಜಿಸುತ್ತಿರಲಿ ಎಂಬುದು ಈತನ ಆಶಯ. ಹರಿಹರ, ಭೀಮಕವಿ, ಸುರಂಗಕವಿ ಮೊದಲಾದವರು ಸಂಕ್ಷೇಪವಾಗಿ ಹೇಳಿರುವ ಕಥೆಯನ್ನೇ ಸಮಗ್ರವಾಗಿ ರೂಪಿಸಲು ಶರಣರು ಕೇಳಿಕೊಂಡಿದ್ದರಿಂದ ಕವಿ ಇದನ್ನು ರಚಿಸಿದನಂತೆ. ಹರಿಹರನ ನಂಬಿಯಣ್ಣನ ರಗಳೆಗೆ ಹೋಲಿಸಿದರೆ ಕಾವ್ಯದೃಷ್ಟಿಯಿಂದ ಇದೇನೂ ಅಂತ ಗಮನಾರ್ಹವಾದ ಕೃತಿಯಲ್ಲ ಎನ್ನಬಹುದು.

19 ಸಂಧಿಗಳಿರುವ ರೇವಣಸಿದ್ಧೇಶ್ವರ ಪುರಾಣ 1145 ವಾರ್ಧಕಷಟ್ಪದಿಗಳನ್ನೊಳಗೊಂಡಿದೆ. ಗುರುಬಾಲಸಿದ್ಧೇಶ್ವರನ ಆಜ್ಞೆಯಿಂದ ರಚಿಸಿದ ಈ ಕೃತಿಯನ್ನು ಶಾಂತಮಲ್ಲೇಶನಿಗೆ ಕವಿ ಅಂಕಿತಮಾಡಿದ್ದಾನೆ. ಈ ಕೃತಿಯನ್ನು ರಸಿಕರ ರತ್ನರಸಾಯನ, ಮಹಾಕಾವ್ಯ, ಅಮರ್ದಗಾಲುವೆ, ರಸದಾಳೆ, ರಸದ ಪೆರ್ಬೊನಲು ಎಂದು ಹೇಳಿಕೊಂಡಿದ್ದಾನೆ. ಕಾವ್ಯ ದೃಷ್ಟಿಯಿಂದ ಗಮನಾರ್ಹವಾದ ಅಂಶಗಳು ಕಡಿಮೆ. ರೇವಣಸಿದ್ದೇಶ್ವರರನ್ನು ಕುರಿತ ಪುರಾಣರೂಪದ ಕಥೆ ಮಾತ್ರ ಇಲ್ಲಿದೆ.
ವೀರಶೈವ ಸಾಹಿತ್ಯದ ಪುನರುಜ್ಜೀವನ ಕಾಲದಲ್ಲಿ ಹಿಂದಿನ ಕವಿಗಳು ಬರೆದಿದ್ದ ರೇವಣಸಿದ್ಧ ಹಾಗೂ ನಂಬಿಯಣ್ಣ ಇವರ ಕಥೆಗಳನ್ನು ಷಟ್ಪದಿಗಳ ಯುಗದಲ್ಲಿ ಬಂದ ಈತ ವಾರ್ಧಕಷಟ್ಪದಿಗಳಲ್ಲಿ ಬರೆದಿದ್ದಾನೆನ್ನುವುದಷ್ಟೇ ಈತನ ಹಿರಿಮೆ. ಕನ್ನಡ ಮತ್ತು ಸಂಸ್ಕøತಭಾಷೆಗಳ ಸಂಬಂಧವನ್ನು ಕುರಿತು ಹೇಳಿರುವ ಈತನ ಹೊಂದಾಣಿಕೆಯ ಮಾತುಗಳು ಗಮನಾರ್ಹವಾಗಿದೆ.
(ಜಿ.ಎಸ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ